ಬುಧವಾರ, ಡಿಸೆಂಬರ್ 31, 2014

ಭಾನುವಾರ, ಡಿಸೆಂಬರ್ 21, 2014

ಸಿದ್ದಲಿಂಗಯ್ಯ 
ನಾನು ೧೯೭೯ ರಲ್ಲಿ ನೋಡಿದ "ಇಕ್ಕರ್ಲಾ ವದೀರ್ಲಾ, ನನ್ನ ಮಕ್ಳ ಚರ್ಮ ಎಬ್ರಲಾ.." ಎಂಬ ಆಕ್ರೋಶ ಇದ್ದ ಸಿದ್ದಲಿಂಗಯ್ಯ ಅವರಿಗೂ, ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿರುವ ಈಗಿನ ಸಿದ್ದಲಿಂಗಯ್ಯ ಸಾಕಷ್ಟು ಕಂದಕ ಇದ್ದರೂ ಅವರು ಶ್ರವಣಬೆಳಗೊಳದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನನಗಂತೂ ಖುಷಿ ಇದೆ. ಇದಕ್ಕಾಗಿ ಸಿದ್ದಲಿಂಗಯ್ಯ ಅವರನ್ನು ಅಭಿನಂದಿಸುತ್ತೇನೆ. ದಲಿತ ಸಾಹಿತಿಯೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲೇಬೇಕೆಂದು ದೃಢ ನಿಶ್ಚಯ ಮಾಡಿ ಹಾಗೇ ನಡೆದುಕೊಂಡ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಕೂಡಾ ಅಭಿನಂದನೆಗೆ ಅರ್ಹರು. ಈ ಹಿಂದೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೊಬ್ಬರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಹಠತೊಟ್ಟು ಅದರಂತೆ ನಾ.ಡಿಸೋಜಾ ಅವರನ್ನು ಕನ್ನಡ ತೇರಿಗೆ ತಂದ ಗೌರವವೂ ಹಾಲಂಬಿ ಅವರಿಗೆ ಸಲ್ಲಬೇಕು. ಹಾಲಂಬಿ ಸಾದಾ ಸೀದಾ ಸರಳ ಮನುಷ್ಯ. ಈ ಹಿಂದೆ ಯಾವುದೇ ಅಧ್ಯಕ್ಷರ ಅವಧಿಯಲ್ಲಿ ಕೈಗೊಳ್ಳಲು ಸಾಧ್ಯವಾಗದ ನಿರ್ಧಾರ ಕೈಗೊಂಡಿರುವುದು  ಹಾಲಂಬಿ ಅವರ ಸಾಮಾಜಿಕ ಪ್ರಜ್ಞೆಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.ಆದರೆ ಈ ನಿರ್ಧಾರದಲ್ಲೂ ಅನಗತ್ಯ ಅಪಸ್ವರಗಳು ಕೇಳಿ ಬರತೊಡಗಿವೆ. ಸಿದ್ದಲಿಂಗಯ್ಯ ಅವರನ್ನು ದಲಿತ ಅನ್ನುವ ಕಾರಣಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲ, ಅವರನ್ನು ಪ್ರತಿಭೆ ಆಧಾರದ ಮೇಲೆ ಆಯ್ಕೆ ಮಾಡಬೇಕಿತ್ತು, ಹಾಗೆಂದು ಅವರು ಪ್ರತಿಭಾವಂತರಲ್ಲ ಎನ್ನುವ ವಾದ ತಮ್ಮದಲ್ಲ ಎಂಬ ಸಮರ್ಥನೆಯನ್ನೂ ಈ ಮಂದಿ ನೀಡುತ್ತಿದ್ದಾರೆ.ಇಂಥ ಅಪಸ್ವರ ಕೇಳಿ ಬರುತ್ತಿರುವುದು ಬಹುತೇಕ ಜ್ಞಾನಪೀಠ ಪ್ರಶಸ್ತಿಗಳನ್ನು, ಅನೇಕ ಸಮ್ಮೇಳನಗಳ ಅಧ್ಯಕ್ಷ ಸ್ಥಾನಗಳನ್ನು ಲಪಟಾಯಿಸಿರುವ ಸಮುದಾಯಕ್ಕೆ ಸೇರಿದವರಿಂದ.ಇಂಥವರ್ಯಾರಾದರೂ ಈ ಮೊದಲು ದೇವನೂರು ಅಥವಾ ಸಿದ್ದಲಿಂಗಯ್ಯ ಅವರಿಗೆ ಸಮ್ಮೇಳನ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದ್ದರೇ? ಕಸಾಪಕ್ಕೆ ಶತಮಾನ ತುಂಬುವವರೆಗೆ,  ೮೦ ಕ್ಕೂ ಹೆಚ್ಚು ಸಾಹಿತ್ಯ ಸಮ್ಮೇಳನಗಳಾಗುವವರೆಗೆ ಯಾಕೆ ಈ ಮಂದಿ ಬಾಯಿ ಮುಚ್ಚಿಕೊಂಡಿದ್ದರು? ಸ್ವತಃ ಸಿದ್ದಲಿಂಗಯ್ಯ ಅವರೇ ತಮ್ಮನ್ನು ದಲಿತ ಕವಿ ಎಂದು ಕರೆಯಬೇಡಿ, ಕವಿ ಎಂದು ಗುರುತಿಸಿದರೆ ಸಾಕು ಎಂದು ಬಹಳ ಹಿಂದೆಯೇ ಹೇಳಿದ್ದಾರೆ. ಅದು ಸರಿ ಕೂಡಾ. ಯಾರನ್ನು ತಾನೇ ಒಕ್ಕಲಿಗ ಕವಿ, ಲಿಂಗಾಯತ ಕವಿ,ಬ್ರಾಹ್ಮಣ ಕವಿ, ಬೆಸ್ತ ಕವಿ ಎಂದು ಕರೆದಿದ್ದಾರೆ? ಆದರೆ ಸಿದ್ದಲಿಂಗಯ್ಯ ಅವರ ಜಾತಿ ಗುರುತಿಸಿದ್ದರಲ್ಲಿ ತಪ್ಪಾದರೂ ಏನಿದೆ? ಹಾಗಾದರೆ ಜಾತಿ ಅನ್ನೋದು ಇಲ್ವೇ ಇಲ್ವಾ? ಜಾತಿ ಇರಬಾರದು ಎನ್ನುವುದು ಸರಿ. ಆದರೆ ಅದಕ್ಕೆ ತಕ್ಕಂತೆ ಜಾತ್ಯತೀತ ವಾತಾವರಣ ನಿರ್ಮಾಣವಾಗಿದೆಯೇ? ಈಗ ಇದನ್ನು ಹೇಳುತ್ತಿರುವವರಾದರೂ ಯಾರು? ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದವರ ವಂಶಸ್ಥರೇ ಈ ಮಾತನ್ನು ಹೇಳುತ್ತಿದ್ದಾರೆ. ಜಾತಿ ಆಧಾರಿತ ಸಮಾಜ ಸೃಷ್ಟಿ ಮಾಡಿ ಅದರ ಮೇಲು ಸ್ತರದ ಎಲ್ಲ ಹುದ್ದೆಗಳನ್ನು ಕಬಳಿಸುತ್ತಿದ್ದವರು ಈಗ ಮೀಸಲಾತಿಯಿಂದ ಬುಡಕ್ಕೆ ಬಿಸಿ ಕಾಯ್ದ ನಂತರ "ಜಾತ್ಯತೀತ" ಮಾತು ಶುರು ಮಾಡಿದ್ದಾರೆ." ಜಾತ್ಯತೀತ" ಮಾತು ಅಂದರೆ ಮಾತು ಮಾತ್ರವೇ ಹೊರತು ಅವರ ಮನೋಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ? ಮಾತು ಶುರು ಮಾಡಿದರೆ ಪ್ರತಿಭೆ, ಪ್ರತಿಭೆ ಅಂತ ಬಡಬಡಿಸುತ್ತಾರಲ್ಲಾ? ಕನ್ನಡದ ಮಹೋನ್ನತ ಸಾಹಿತಿ, ಈ ನೆಲದ ಸಾಕ್ಷೀಪ್ರಜ್ಞೆಯಾಗಿದ್ದ ಲಂಕೇಶ್ ಅವರಿಗೆ ಯಾಕೆ ಜ್ಞಾನಪೀಬರಲಿಲ್ಲ? ಕನ್ನಡದಿಂದ ಜ್ಞಾನಪೀಠ ಪ್ರಶಸ್ತಿ ಪಡೆದವರೆಲ್ಲ ಈ ಪ್ರಶಸ್ತಿಗೆ ಅರ್ಹರಾಗಿದ್ದರೇ?
ನನಗೂ ಸಿದ್ದಲಿಂಗಯ್ಯ ಅವರಿಗೆ ಸಂಬಂಧಿಸಿದಂತೆ ಕೆಲವು ತಕರಾರುಗಳಿವೆ. ಅದು ಈ ಮಹಾನ್ "ಜಾತ್ಯತೀತ" ವ್ಯಕ್ತಿಗಳ ಸ್ವಾರ್ಥ ಚಿಂತನೆ ಆಧರಿಸಿದ್ದಲ್ಲ. "ಗುಡಿಸಲುಗಳು ಗುಡುಗುತ್ತಿವೆ, ಬಂಗಲೆಗಳು ನಡುಗುತ್ತಿವೆ.." ಎಂದು ಸಾತ್ವಿಕ ಸಿಟ್ಟು ತೋರಿದ್ದ ಸಿದ್ದಲಿಂಗಯ್ಯ ಈ ಹಿಂದೆ ರಾಮಕೃಷ್ಣ ಹೆಗಡೆ ಮು.ಮಂ. ಆಗಿದ್ದಾಗ ಮೊದಲ ಸಲ ಎಂ.ಎಲ್.ಸಿ. ಆದಾಗ ನನಗೇನೂ ಆಕ್ಷೇಪ ಇರಲಿಲ್ಲ. ಆನಂತರ ಎರಡನೇ ಅವಧಿಗೂ ಇದೇ ಸ್ಥಾನವನ್ನು ಪಡೆದು ಮುಂದುವರಿದ ಬಗ್ಗೆ ನನಗೆ ಅಸಮಾಧಾನವಿತ್ತು. ಅದನ್ನು ನಾನು ಆಗಿದ್ದ ಲಂಕೇಶ್ ಪತ್ರಿಕೆಯಲ್ಲೇ ಬರೆದಿದ್ದೆ ಕೂಡಾ.ಅಷ್ಟಕ್ಕೂ ಸುಮ್ಮನಾಗದೆ ಕುಮಾರಸ್ವಾಮಿ ಮು.ಮಂ. ಆದಾಗ, ಯಡಿಯೂರಪ್ಪ ಮು.ಮಂ. ಆದಾಗ ಯಾವ್ಯಾವುದೋ ಪ್ರಾಧಿಕಾರದ ಅಧ್ಯಕ್ಷ ಸ್ಥಾನಗಳಲ್ಲಿ ಮುಂದುವರಿಯಲು ಅವರ ಊರು ಕೇರಿ ಆತ್ಮಕತೆಯನ್ನು ಈ ಜನವಿರೊಧಿ ನಾಯಕರಿಗೆ ಅರ್ಪಿಸಿದ್ದರ ಬಗ್ಗೆ ನನಗೆ ತುಂಬ ಸಿಟ್ಟಿದೆ.ಒಂದು ತಲೆಮಾರಿನ ಮೇಲೆ ಅಪಾರ ಪ್ರಭಾವ ಬೀರಿದ್ದ ಬರಹಗಾರನೊಬ್ಬ ಹೀಗಾಗಬಾರದಿತ್ತು ಅನ್ನುವ ನೋವು ಮತ್ತು ಸಿಟ್ಟು ಅದು. ಇಷ್ಟೆಲ್ಲದರ ನಡುವೆಯೂ ಅವರು ಮುಖವಾಡ ಹಾಕಿಕೊಂಡು ಬದುಕುತ್ತಿಲ್ಲ.ಅವರೊಳಗೆ ಇನ್ನೂ ಅಪ್ಪಟ ಮನುಷ್ಯ ಇನ್ನೂ ಉಳಿದಿದ್ದಾನೆ. ಅವರ ಹಾಸ್ಯ ಪ್ರಜ್ಞೆಗೆ ಕುಂದುಂಟಾಗಿಲ್ಲ. ಎಲ್ಲ ರಾಜಿಗಳ ನಡುವೆಯೂ ತಮ್ಮ ವಿಚಾರಧಾರೆಗಳನ್ನು ಮರೆತಿಲ್ಲ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ. ಇವತ್ತಿಗೂ ಸಿದ್ದಲಿಂಗಯ್ಯ ಅವರ ಜತೆ ಯಾವುದೇ ಸಾಮಾನ್ಯ ಮನುಷ್ಯನೊಬ್ಬ ಇವತ್ತಿಗೂ ಸಂಭಾಷಿಸುವುದು ಸಾಧ್ಯವಿದೆ.ಆದರೆ ಅವರ ಜತೆಯಲ್ಲೇ ಬೆಳೆದ ಎಷ್ಟೋ ಬರಹಗಾರರಿಗೆ ಈ ಸೌಜನ್ಯವೂ ಗೊತ್ತಿಲ್ಲ. ಈಗ ಪುಂಡಲೀಕ ಹಾಲಂಬಿ ಅವರು ಈ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ಇನ್ನೆರಡು ಶತಮಾನವಾದರೂ ಈ ಗೌರವ ದಲಿತ ಸಮುದಾಯಕ್ಕೆ ಸೇರಿದ ಪ್ರತಿಭಾವಂತ ಬರಹಗಾರನೊಬ್ಬನಿಗೆ ಸಿಗುವುದು ಕಷ್ಟವಿತ್ತು. ಪ್ರತಿಭೆ ಅಂದರೆ ಮಾನದಂಡ ಏನು? ಒಂದೇ ಜಾತಿಗೆ ಸೇರಿದ ಆಯ್ಕೆಯೇ? ಪ್ರಭಾವಿಗಳು ಮತ್ತು ಪ್ರಬಲರನ್ನು ಮಾತ್ರ ಓಲೈಸುವ ಆಯ್ಕೆಯೇ?      

ಶನಿವಾರ, ಡಿಸೆಂಬರ್ 6, 2014

ಸೋಮವಾರ, ನವೆಂಬರ್ 24, 2014

ಆಪರೇಷನ್ ಸ್ಯಾಂಡಲ್ ಫಾಕ್ಸ್

{೨೦೦೬ ರಲ್ಲಿ ಪ್ರಕಟವಾದ ನನ್ನ "ಆಪರೇಷನ್ ಸ್ಯಾಂಡಲ್ ಫಾಕ್ಸ್" ಲೇಖನಗಳ ಸಂಕಲನದಲ್ಲಿ ನಾಡಿನ ಮಹತ್ವದ ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಅವರು  ಬರೆದಿರುವ ಮುನ್ನುಡಿ}   
ಟಿ.ಕೆ.ತ್ಯಾಗರಾಜ್  ಅವರ " ಆಪರೇಷನ್ ಸ್ಯಾಂಡಲ್ ಫಾಕ್ಸ್ " ಲೇಖನಗಳ  ಸಂಕಲನ, ವಿಷಯ ವೈವಿಧ್ಯ ಮತ್ತು ಉಗುರು ಬೆಚ್ಚಗಿನ ವೈಚಾರಿಕತೆಯಿಂದ ಗಮನೀಯವಾಗಿದೆ. ಕ್ರೀಡೆ, ಪತ್ರಿಕೋದ್ಯಮ, ಸಿನಿಮ, ರಾಜಕೀಯ -ಇವೇ ಮುಂತಾದ ವಸ್ತು  ವಿಷಯಗಳ ಮೂಲಕ ಮಾನವೀಯ ಸೆಳೆತಕ್ಕೆ ಚಾಚಿಕೊಳ್ಳುವ ರಚನೆಗಳು ಇತಿಮಿತಿಗಳ ನಡುವೆಯೂ   ಇಷ್ಟವಾಗುತ್ತವೆ. ಪತ್ರಿಕೆಯ ಅಗತ್ಯಕ್ಕಾಗಿ ಬರೆದ ಮಿತಿಯಲ್ಲೂ ಲೇಖಕರ ದೃಷ್ಟಿಕೋನ ಮುಕ್ಕಾಗಿಲ್ಲ. ವಿಷಯ ಶೋಧದ ಬದಲು ವಿಷಯ ವಿವರಣೆ ಮತ್ತು ನಿರೂಪಣೆಯ ವಿಧಾನದಲ್ಲಿ ತೆರೆದುಕೊಳ್ಳುವ ಬರಹಗಳು ಭಾವ-ಬುದ್ಧಿಗಳನ್ನು ಬೆಸೆಯಲು ಮಾಡಿರುವ ಪ್ರಯತ್ನದಿಂದ ಹಸಿತನದಿಂದ ಮುಕ್ತವಾಗಿವೆ. ಓದುಗನನ್ನು ಗಮನದಲ್ಲಿಟ್ಟುಕೊಂಡು ಸಂವಹನಶೀಲವಾಗುವ ಶೈಲಿಯನ್ನು ಒಳಗೊಂಡು ಸಂಕೀರ್ಣತೆಯ ಬದಲು ಸರಳತೆಯ ಹಾದಿ ಹಿಡಿದಿದೆ. ಆದರೆ ಸರಳತೆ ಒಂದು ದೌರ್ಬಲ್ಯವಾಗಿಲ್ಲ.: ಸಂವಹನೆಯ ಸಾಧನವಾಗಿದೆ
ನನ್ನ ಮಾತಿಗೆ ಉದಾಹರಣೆಯಾಗಿ " ಶಿವಾಜಿನಗರ ಎಂಬ ವಿಶಿಷ್ಠ ಜೀವನ " ಎಂಬ ಲೇಖನ ನೋಡಬಹುದು. ಬೆಂಗಳೂರಿನ ಶಿವಾಜಿನಗರದ ಬಗ್ಗೆ ಇರುವ "ಮೂಢ ನಂಬಿಕೆ"ಗಳನ್ನು ನಿವಾರಣೆ ಮಾಡುವ ಲೇಖನ ಮನನೀಯವಾಗಿದೆ. ಇದು ಕೇವಲ ಒಂದು ಬಡಾವಣೆಯ ಚಿತ್ರಣವಾಗುವ ಬದಲು ಜೀವನ ವಿಧಾನವನ್ನು ಪರಿಚಯಿಸುತ್ತಲೇ ಕೋಮು ಸೌಹಾರ್ದದ ಸೇತು ಚಿಂತನೆಯನ್ನು ಒಳಗೊಳ್ಳುತ್ತದೆ. "ಷಿವಾಜಿನಗರದಲ್ಲಿ ಓಡಾಡುತ್ತಿದ್ದರೆ ನೂರಕ್ಕೂ ಹೆಚ್ಚು ದೇವಾಲಯಗಳು, ಎಂಬತ್ತಕ್ಕೂ ಹೆಚ್ಚು ಮಸೀದಿಗಳು, ಐವತ್ತಕ್ಕೂ ಹೆಚ್ಚು ಚರ್ಚ್ಗಳು,  ಜೈನ ಮಂದಿರಗಳು ಕಾಣಸಿಗುತ್ತವೆ" ಎಂಬ  ಸತ್ಯವನ್ನು ಮನಗಾಣಿಸುತ್ತದೆ. ಅಪರೂಪದ ಮುಸ್ಲಿಂ ಲೈಬ್ರರಿಯ ಬಗ್ಗೆ ಬರೆದಿರುವ ವಿವರಗಳು ಉಪಯುಕ್ತವಾಗಿವೆ. ಲೈಬ್ರರಿಯ ಇತಿಹಾಸವನ್ನು ತ್ಯಾಗರಾಜ್ ಚಿತ್ರಿಸುತ್ತಾ ಹೋದಂತೆ ಅದರ ಅಮೂಲ್ಯ ಅಸ್ತಿತ್ವ ಅನಾವರಣಗೊಳ್ಳುತ್ತದೆ. ಶಿವಾಜಿನಗರವೆಂದರೆ ಕೇವಲ ಮುಸ್ಲಿಂ ಪ್ರಾಬಲ್ಯದ ಗಲಭೆ ಸ್ಥಾನವೆಂಬ ತಿಳುವಳಿಕೆಯನ್ನು ಸುಳ್ಳಾಗಿಸುವ ಬರಹವು ಕಡೆಗೆ ಮುಕ್ತಾಯವಾಗುವುದು ಹೀಗೆ: "ಕೂಡಿ ಬಾಳುವುದೇ ಇಲ್ಲಿನ ಉಸಿರಾಗಿದೆ. ಭಾರತ ಹೇಗಿರಬೇಕೆನ್ನುವುದಕ್ಕೆ ಪುಟ್ಟ ಭಾರತ {ಶಿವಾಜಿನಗರ}ಕ್ಕೆ ಎಲ್ಲರೂ ಭೇಟಿ ನೀಡಬೇಕು. ಶಾಂತಿ, ಸಹನೆ, ಸಹಬಾಳ್ವೆ, ಸಮನ್ವಯತೆಯ ಶಿವಾಜಿನಗರ ಮನುಕುಲಕ್ಕೆ ಮಾದರಿಯಾಗಿದೆ. ಹಾಗೇ ಇರಲಿ."
ಆದರೆ "ಗಾಂಧಿನಗರ"ವನ್ನು ಕುರಿತ ಲೇಖನಕ್ಕೆ ಇಷ್ಟು ಗಂಭೀರ ಆಯಾಮ ಲಭ್ಯವಾಗಿಲ್ಲ. "ಗಾಂಧಿನಗರ: ಭ್ರಮೆಗಳ ಭಂಡಾರ" ಎಂಬ ಲೇಖನವು ನಿಶಾಲೋಕದ ಥಳಕು ಬಳಕುಗಳ ವಯ್ಯಾರಕ್ಕೆ ಮೀಸಲಾಗಿದೆ. ವಯ್ಯಾರದಾಚೆಗಿನ ವಿಷಾದಕ್ಕೆ ತಕ್ಕ ಸ್ಥಾನ ಸಿಕ್ಕದಿರುವುದು ಲೇಖನದ  ಮಿತಿಯಾಗುತ್ತದೆ. ಬಹುಶಃ ಲೇಖನದ ವಸ್ತುವನ್ನು ಕುರಿತ ಪೂರ್ವನಿಶ್ಚಿತ ಚೌಕಟ್ಟು ಇದಕ್ಕೆ ಕಾರಣವಿದ್ದೀತು.  
ಮಾಧ್ಯಮಗಳು   ವಿಶೇಷವಾಗಿ ಪತ್ರಿಕಾ ಮಾಧ್ಯಮ ನಿರ್ವಹಿಸುತ್ತಿರುವ ಕಾರ್ಯವಿಧಾನವನ್ನು ಕುರಿತಂತೆ ಒಳಗಿಂದ ಮಾತನಾಡುವ ತ್ಯಾಗರಾಜ್  ಅವರ ವ್ಯಗ್ರತೆ ವಿಶೇಷವಾಗಿದೆ. ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಮಾಡುತ್ತಲೇ ಅಲ್ಲಿನ ಅರೆಕೊರೆಗಳನ್ನು ಕೊಂಚ ಕೋಪದಿಂದಲೇ  'ಬಯಲು ಮಾಡುವ' ತ್ಯಾಗರಾಜ್ ಬಗ್ಗೆ ಒಟ್ಟು ಮೂರು ಲೇಖನಗಳನ್ನು ಬರೆದಿದ್ದಾರೆ. ಇವುಗಳಲ್ಲಿ "ಭ್ರಮೆಗಳನ್ನು ಬಿಟ್ಟು"  ಎಂಬ ಪುಟ್ಟ ಬರಹ ಚೆನ್ನಾಗಿದೆ. ವ್ಯಗ್ರತೆಯ ಬದಲು ವಿಷಾದ, ಶೂರ ಶೈಲಿಯ ಬದಲು ಸಂಕಟ, ವ್ಯಕ್ತಿ ವೈಪರೀತ್ಯದ ಬದಲು ಸಮಚಿತ್ತಗಳನ್ನು ಒಳಗೊಂಡ ಎರಡೂವರೆ ಪುಟಗಳ ಬರಹವು ಲೇಖಕರ ಜೀವನ ದೃಷ್ಟಿಯ ಗಾಢತೆಯನ್ನೂ ಪರಿಚಯಿಸುತ್ತದೆ. ಅವರು ಬರೆಯುತ್ತಾರೆ : "ನನ್ನಂಥವರು ಪತ್ರಿಕೋದ್ಯಮಕ್ಕೆ ಬಂದ ದಿನಗಳ ಆದರ್ಶ ಇಂದು ಕಾಣುತ್ತಿಲ್ಲ. ನಮ್ಮ ಬಳಿಯಲ್ಲಿ ಕತ್ತಿ ಕೋವಿ ಇರುತ್ತಿರಲಿಲ್ಲ. ಒಂದು  ಪೆನ್ ನಿಂದ  ಇಡೀ ಸಮಾಜವನ್ನೇ ಬದಲಿಸಿ ಬಿಡಬಹುದೆನ್ನುಅ ಭ್ರಮೆ ಇತ್ತು. ಜಾತಿರಹಿತ ಸಮಾಜದ ಕನಸಿತ್ತು. ಬರೆಯುವ ಮೂಲಕ ರಾಜಕಾರಣಿಗಳ ಬೆನ್ನು ಮುರಿಯಬಹುದೆನ್ನುವ ಅಭಿಮನ್ಯುವಿನ ದಿಟ್ಟತನವಿತ್ತು. ನಮಗೆ  ಆದರ್ಶರಾದವರನ್ನು ದೂರದಿಂದಲೇ ನೋಡಿ ಅವರ ವಿಚಾರಗಳನ್ನು ರೂಢಿಸಿಕೊಳ್ಳುವ ಏಕಲವ್ಯನ ಶ್ರದ್ಧೆ ಇತ್ತು. ಹಾಗೇ ವೃತ್ತಿಯ ಬಗ್ಗೆ, ಸಂಸ್ಥೆಯ ಬಗ್ಗೆ, ನಮ್ಮ ನಾಯಕನ ಬಗ್ಗೆ ಕರ್ಣನ ಧೀರ ನಿಷ್ಠೆ ಇರುತ್ತಿತ್ತು."
ಅಭಿಮನ್ಯುವಿನ ದಿಟ್ಟತನ, ಏಕಲವ್ಯನ  ಶ್ರದ್ಧೆ, ಕರ್ಣನ ಧೀರ ನಿಷ್ಥೆಗಳನ್ನು ಸಮಕಾಲೀನ ಸಂಕೇತಗಳಾಗಿ ಬಳಸುವ ರೀತಿ ಸೊಗಸಾಗಿದೆ. ಆದರೆ ಕರ್ಣನ ಧೀರ ನಿಷ್ಠೆಯನ್ನು 'ನಾಯಕ ನಿಷ್ಥೆಗೆ' ಮಾತ್ರ  ಸೀಮಿತಗೊಳಿಸಿದಾಗ ಕೆಲವು ವೈಪರೀತ್ಯಗಳಿಗೂ ಕಾರಣವಾಗುತ್ತದೆಯೆಂಬುದನ್ನು ನಾವು ಕಂಡಿದ್ದೇವೆ. ಕಡೆಗೂ ವಂಚಿತನಾಗುವವನು ಕರ್ಣನೇ ಎಂಬ ಧ್ವನಿಯಿರುವುದಾದರೆ ಇಂಥ ಸಂಕೇತಗಳು ಸಾರ್ಥಕವಾಗುತ್ತವೆ. ಅದೇನೇ ಇರಲಿ, ಪುಟ್ಟ ಲೇಖನವು ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಲೇ ಒಟ್ಟು ಸಮಾಜದ ಸಂಕಟವನ್ನು ಸಾದರಪಡಿಸುತ್ತದೆ. ಲಾಭ ನಷ್ಟದ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುವ ವೈದ್ಯರು, ವಕೀಲರು, ಇಂಜಿನಿಯರ್ ಗಳು, ಕಲಾವಿದರು, ಬರಹಗಾರರು ಮೌಲ್ಯಗಳ ಅವನತಿಗೆ ಕಾರಣವಾದದ್ದರ ಬಗ್ಗೆ ವಿಷಾದವಿದೆ. ಆದರೆ "ಜವಾಬ್ದಾರಿ ಮರೆತ ಮಾಧ್ಯಮ" ಲೇಖನವು ದೀರ್ಘವಾಗಿದ್ದರೂ ಸರಳ ತೀರ್ಮಾನಗಳಿಂದ ಕೂಡಿದೆ. "ಮಾಧ್ಯಮಗಳಿರುವುದೇ ಸರ್ಕಾರವನ್ನು ಟೀಕಿಸುವುದಕ್ಕೆ, ಅವ್ಯಹವಾರವನ್ನು ಬಯಲು ಮಾಡುವುದಕ್ಕೆ, ವಿರೋಧಿಸುವುದಕ್ಕೆ, ಮುಖವಿಲ್ಲದವರ ಮುಖಕ್ಕೂ ಮಂಗಳಾರತಿ ಮಾಡುವುದಕ್ಕೆ" ಎಂದು ಭಾವಿಸುವ ಈ ಲೇಖನವು 'ವಿರೋಧಿ ವ್ಯಾದಿ'ಯ ವೈಪರೀತ್ಯಗಳನ್ನು ಗಮನಿಸುವುದಿಲ್ಲ ನಿಜ: ಇಲ್ಲಿ ಉಲ್ಲೇಖಿಸಿದ ಕೆಲಸಗಳನ್ನು ಮಾಧ್ಯಮಗಳು ಮಾಡಬೇಕು. ಆದರೆ ಏಕಮುಖಿಯಾದ ಇದಿಷ್ಟೇ ಕೆಲಸಕ್ಕೆ ಸೀಮಿತವಾದರೆ ಅದು ಪಕ್ಷಪಾತವಾಗುವ ಅಪಾಯವಿದೆ. ಪರ-ವಿರೋಧ ಎಂಬ ಸರಳ ವಿಂಗಡನೆಗಿಂತ ಸತ್ಯದ ಗರ್ಭಪಾತವಾಗದಂತೆ ನೋಡಿಕೊಳ್ಳುವ ನೈತಿಕ ಜವಾಬ್ಧಾರಿಯನ್ನು ಮಾಧ್ಯಮಗಳು ನಿರ್ವಹಿಸಬೇಕಾಗುತ್ತದೆ. ಇದು ತ್ಯಾಗರಾಜ್ ಅವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಅವರ ಕೆಲವು ಲೇಖನಗಳು ಈ ಜವಾಬ್ಧಾರಿಗೆ ತಕ್ಕಂತೆ ರೂಪುಗೊಂಡಿರುವುದು ನನ್ನ  ಮಾತಿಗೆ ಸಮರ್ಥನೆಯಾಗಿದೆ.. 'ಕಪಿಲ್, ಕೈಫ್, ದ್ವಾರಕಾನಾಥ್' ಎಂಬ ಲೇಖನದಲ್ಲಿ ದ್ವಾರಕನಾಥ್ ಮಾತುಗಳನ್ನು ಹಸಿಹಸಿಯಾಗಿಯೇ  ದಾಖಲಿಸುತ್ತ ಆನಂತರ ನಡೆದ ವಾದ-ವಿವಾದಗಳನ್ನು ಇದ್ದ ಹಾಗೆಯೇ ಕೊಡುವ ಮೂಲಕ ಒಟ್ಟು ಚಿತ್ರವನ್ನು ಓದುಗರಿಗೆ ನೀಡುತ್ತಾರೆ. ಸತ್ಯಗ್ರಹಿಕೆಯನ್ನು ನಮಗೇ ಬಿಡುತ್ತಾರೆ. ಹೀಗೆ ಬಿಡುವಾಗಲೂ ಅವರೊಂದು ಸತ್ಯವನ್ನು ಕಟ್ಟಿಕೊಂಡಿರುತ್ತಾರೆ. ಸಚಿನ್ ಬಗ್ಗೆ, ಶ್ರೀನಾಥ್ ಬಗ್ಗೆ ಬರೆದ ಲೇಖನಗಳು ಸಮರ್ಥವಾಗಿ ಮೂಡಿ ಬಂದಿದ್ದು ಲೇಖಕರು ಕಂಡುಕೊಂಡ ಸತ್ಯ ಅನಾವರಣಗೊಳ್ಳುತ್ತದೆ. ನಮ್ಮ ದೇಶದ ಸಮರ್ಥ ಆಲ್ ರೌಂಡರ್ ಕಪಿಲ್ ದೇವ್ ಕುರಿತ ಅಭಿಪ್ರಾಯಗಳು ಸರಿ ದಿಕ್ಕಿನಲ್ಲಿವೆ. ಇಂದಿಗೂ ಕಪಿಲ್ ಜಾಗವನ್ನು ಯಾರೂ ತುಂಬಿಲ್ಲವೆಂಬ ಸತ್ಯ ಅಪ್ರಿಯವಾದರೂ ವಾಸ್ತವ. ಸಾಮಾನ್ಯ ಕಟ್ಟಿಗೆ ವ್ಯಾಪಾರಿ ಕುಟುಂಬದಿಂದ ಬಂದು ಏಕಲವ್ಯ ಶ್ರದ್ಧೆ, ಅಭಿಮನ್ಯುವಿನ ದಿಟ್ಟತನದಿಂದ ಬೆಳೆದ ಕಪಿಲ್ ಕ್ರೀಡಾಲೋಕದ ಆದರ್ಶವಾಗಿದ್ದಾರೆ. ಆದರೆ ಕ್ರೀಡಾ ರಾಜಕೀಯವನ್ನು ಮಾತ್ರವೇ ಮುಂದು ಮಾಡುವುದು ಸಹ ಒಂದು ವೈಪರೀತ್ಯವಾಗುವ ಅಪಾಯವಿರುತ್ತದೆ. ನಮ್ಮ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲಿರುವ ಜಾತಿ ರಾಜಕೀಯವನ್ನು ಚಾರಿತ್ರಿಕವಾಗಿ ಗುರುತಿಸುತ್ತಲೇ ಇಂದಿನ ಜಾತಿ ರಾಜಕೀಯವು ಎಲ್ಲ ಜಾತಿಗಳಿಗೂ ವ್ಯಾಪಿಸಿಕೊಂಡಿರುವ ವಿಷಾದವನ್ನು ಅನುಭವಿಸದಿದ್ದರೆ ವಿಪರೀತದ ತೀರ್ಮಾನಗಳಿಗೆ ಕಾರಣವಾಗುತ್ತದೆ. 
ಗೆಳೆಯ ತ್ಯಾಗರಾಜ್ ಬರಹಗಳು ಗೆಲ್ಲುವುದು ಮಾನವೀಯವಾಗುವ ಮನಸ್ಸಿನ ಮೂಲಕ, ಕಾಡುವ ಕಾಳಜಿಗಳ ಮೂಲಕ. ಮನುಷ್ಯನ ಆಳದ ಖಳ , ಅಮ್ಮ ನಮ್ಮ ಜಾತಿ ಯಾವುದು? ಕನಸುಗಳ ಅಂಗಳಕ್ಕೆ ಒಮ್ಮೆ ಹೋಗೋಣ- ಇಂತಹ ಲೇಖನಗಳು ತ್ಯಾಗರಾಜ್ ಅವರ ಕಾಳಜಿಗಳು ನಮ್ಮನ್ನೂ ಕಾಡುವಂತೆ ಮಾಡುತ್ತವೆ. ಸರಳವಾಗಿ ಶುರುವಾಗುತ್ತಲೇ ವಿರಳ ಬರಹವಾಗಿ ರೂಪುಗೊಳ್ಳುವ ಇಂತಹ ಲೇಖನಗಳಲ್ಲಿ ತ್ಯಾಗರಾಜ್ ಮಿತಿಗಳಿಂದ ಮೇಲೆದ್ದ ಮನುಷ್ಯರಾಗಿ ಕಾಣುತ್ತಾರೆ. ಇಲ್ಲಿ ಮನುಷ್ಯತ್ವವೇ ಅವರ ಮುಖ್ಯ ಕಾಳಜಿಯಾಗುತ್ತದೆ. ಆದರೆ ತಮಗೇ ಅರಿವಿಲ್ಲದಂತೆ 'ಚಪ್ಪಲಿಯನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕು-ಎಂದು ನಮ್ಮ ತಾತ ಹೇಳುತ್ತಿದ್ದ ಮಾತುಗಳು ನೆನಪಾಗುತ್ತವೆ'{ಮನುಷ್ಯನ ಆಳದ ಖಳ} ಎಂದು ಬರೆಯುವಾಗ ತಾತನ ಈ ಮಾತಿನಲ್ಲಿ ಸಾಮಾಜಿಕ ಅಸಮಾನತೆಯ ಪರವಾದ ಸೂಕ್ಷ್ಮ ಇದೆ ಎನ್ನುವುದನ್ನು ಮರೆಯುತ್ತಾರೆ. ರೂಢಿಯಲ್ಲಿರುವ ಇಂತಹ ನುಡಿಗಟ್ಟುಗಳ ಪುನರ್ ವಿಮರ್ಶೆಯ ಅಗತ್ಯವಿದೆಯೆಂದು ಯೋಚಿಸಲು ಅವರಿಗೆ ಸಾಧ್ಯವಾಗಿಲ್ಲವಾದರೂ ಸಾಮಾಜಿಕ ಅಸಮಾನತೆಯನ್ನು ತ್ಯಾಗರಾಜ್ ಯಾವತ್ತೂ ವಿರೋಧಿಸುತ್ತಾರೆ ಎಂಬ ಸತ್ಯಕ್ಕೆ ಸಾಕ್ಷಿಯಾಗಿ ಸಂಕಲನದ ಅನೇಕ ಲೇಖನಗಳು ನಮ್ಮೆದುರು ನಿಂತಿವೆ. ಆ ಬಗ್ಗೆ ಅನುಮಾನವೇ ಇಲ್ಲ. ರೂಢಿಗತ ಚಿಕ್ಕ ಮಾತೊಂದು ಎಂಥ ಅರ್ಥ ವ್ಯಾಪ್ತಿಗೆ ಚಾಚಿಕೊಳ್ಳಬಹುದೆಂಬುದಕ್ಕೆ ಪುರಾವೆಯಾಗಿ ಈ ಪ್ರಸ್ತಾಪ ಮಾಡಿದ್ದೇನೆ ಅಷ್ಟೇ.ತ್ಯಾಗರಾಜ್ ಯಾವತ್ತೂ ಜಾತಿ ಮೂಲ ಷೋಷಣೆಗೆ ವಿರುದ್ಧವಾಗಿರುವುದರಿಂದ ಇದು ಅವರ ಚಿಂತನೆಯ ಮಿತಿಯಲ್ಲ, ರೂಢಿ ಮಾತುಗಳ ಮಿತಿ. ಈ ಮಿತಿಯ ರೂಢಿಯನ್ನು ನಮ್ಮ ಸಮಾಜದ ಮನಸ್ಸು ಮೀರಬೇಕು. 
"ಅಮ್ಮ, ನಮ್ಮ ಜಾತಿ ಯಾವುದು?" ಎಂಬ ಲೇಖನದಲ್ಲಿ ಜಾತಿ ವ್ಯವಸ್ಥೆಯ ಮಾನಸಿಕ ಮಲಿನತೆಯನ್ನು ಘಟನೆಯೊಂದರ ಸರಳ ನಿರೂಪಣೆಯ ಮೂಲಕ ತಿಳಿಸುತ್ತಲೇ ಸೂಕ್ಷ್ಮತೆಗೆ ಚಾಚಿಕೊಳ್ಳುವ ರೀತಿ ಸಮರ್ಥವಾಗಿ ಮೂಡಿ ಬಂದಿದೆ.ವಿನಾಶದ ವಿಕೃತಿಗಳನ್ನು ಮೀರಿದ "ಕನಸಿನಂಗಳಕ್ಕೆ ಒಮ್ಮೆ ಹೋಗೋಣ" ಎನ್ನುವುದು ತ್ಯಾಗರಾಜ್ ಅವರ ಮೂಲ ಕಾಳಜಿಯಾಗಿದೆ. 
ತ್ಯಾಗರಾಜ್ ಅವರ ಭಾಷೆಯನ್ನು ಕುರಿತು ಒಂದು ಮಾತು ಹೇಳಬೇಕು. ಭಾವ-ಬುದ್ಧಿಗಳನ್ನು ಕಟ್ಟಿಕೊಡುವ ಭಾಷೆಯು ಮೂಲ ಮನಸ್ಸಿನ ರೂಕ್ಷತೆ ಅಥವಾ ಸೂಕ್ಷ್ಮತೆಗಳನ್ನು ಬಿಚ್ಚಿಡುತ್ತದೆ. ತ್ಯಾಗರಾಜ್ ಅವರ ಯಶಸ್ವಿ ಲೇಖನಗಳ ಭಾಷೆ ಸರಳತೆ ಮತ್ತು ಸೂಕ್ಷ್ಮತೆಗಳನ್ನು ಒಟ್ಟಿಗೇ ಒಳಗೊಂಡಿದೆ.ಈ ಮೂಲಕ ಅರ್ಥ ವಿಸ್ತರಣೆಗೆ ಕಾರಣವಾಗುತ್ತದೆ. ಉದಾಹರಣೆಗೆ ಮುಂದಿನ ಸಾಲುಗಳನ್ನು ಗಮನಿಸಿ : 
"...... ಓರ್ವ ನಾಯಕ ಜ್ನಪರವಲ್ಲದ ಪ್ರತಿಗಾಮಿ ಧೋರಣೆ ಹೊಂದಿದ್ದರೆ, ಸ್ವಾರ್ಥದ ಮೊಟ್ಟೆಗೆ ಕಾವು ಕೊಡುತ್ತಿದ್ದರೆ, ಸ್ವಜನ ಪಕ್ಷ್ಃಅಪಾತಿಯಾಗಿದ್ದರೆ, ಮಲ್ಲಿಗೆ ನೆಲವು ಮರುಭೂಮಿಯಾಗಿ ಬಿಡುತ್ತದೆ. ಪಾರಿವಾಳ ಆಗಸದಲ್ಲಿ ಹದ್ದು, ಗಿಡುಗಗಳು ಹಾರಾಡುತ್ತಿರುತ್ತವೆ."
ಈ ಸಾಲುಗಳಲ್ಲಿ ಬರುವ ಮಲ್ಲಿಗೆಯ ನೆಲ, ಪಾರಿವಾಳದ ಆಗಸ, ಮ್ರುಭೂಮಿ, ಆಗಸದಲ್ಲಿ ಹದ್ದು, ಗಿಡುಗ- ಈ ಪದಗಳು ಕೇವಲ ಪದಗಳಾಗುವುದಿಲ್ಲ, ರೂಪಕವಾಗುತ್ತದೆ. ರೂಪಕಗಳನ್ನು ಕಟ್ಟುವುದು ಕವಿ ಮನಸ್ಸು. ಪತ್ರಿಕೋದ್ಯಮಕ್ಕೂ ಕವಿ ಮನಸ್ಸು ಬೇಕು. ತ್ಯಾಗರಾಜ್ ಅವರನ್ನು 'ಕವಿ ಮನಸ್ಸು' ಸದಾ ಕಾಯುತ್ತಿರಲಿ. 
                                          -ಬರಗೂರು ರಾಮಚಂದ್ರಪ್ಪ         .                                              


ಬುಧವಾರ, ಮಾರ್ಚ್ 26, 2014

Powered By Blogger

ಬೆಂಬಲಿಗರು

renukacharya avarannu mantri maadiddu sariye?